ಅಧ್ಯಕ್ಷರ ಸಂದೇಶ

ಮಾನ್ಯರೇ,

ಕೂಟ ಮಹಾಜಗತ್ತು ಸಾಲಿಗ್ರಾಮ (ರಿ), ಬೆಂಗಳೂರು ಅಂಗಸಂಸ್ಥೆಯ ಮುಂದಿನ ಮೂರು ವರ್ಷಗಳ ಅವಧಿಗೆ (2024-2027) ಆಯ್ಕೆಯಾದ ನೂತನ ಕಾರ್ಯಕಾರಿ ಸಮಿತಿ ಅಸ್ತಿತ್ವಕ್ಕೆ ಬಂದಿದೆ. ಸಂಸ್ಥೆಯು ಮುಂದಿನ ದಿನಗಳಲ್ಲಿ ಸಾಗಬೇಕಾದ ದಿಕ್ಕನ್ನು ರೂಪಿಸುವ ಬಗ್ಗೆ ಇತ್ತೀಚಿನ ಸರ್ವಸದಸ್ಯರ ಸಭೆಗಳಲ್ಲಿ ಸದಸ್ಯರುಗಳಿಂದ ಅನೇಕ ಅಭಿಪ್ರಾಯಗಳು ವ್ಯಕ್ತವಾಗಿರುತ್ತದೆ. ಅವುಗಳಲ್ಲಿ, ಪ್ರಮುಖವಾದ ಆಶಯಗಳೆಂದರೆ i. ಕೂಟ ಸಮಾಜದಲ್ಲಿ ಅರ್ಥಿಕವಾಗಿ ಅಶಕ್ತ ಹಾಗೂ ಪ್ರತಿಭಾವಂತ ವಿದ್ಯಾರ್ಥಿಗಳನ್ನು ಗುರುತಿಸಿ ಅವರ ವಿದ್ಯಾಭ್ಯಾಸ ಜವಾಬ್ದಾರಿ ಹೊರುವುದು, ii. ಅಶಕ್ತ ಕೂಟ ಬಂಧುಗಳ ಅನಾರೋಗ್ಯದ ವೆಚ್ಚಕ್ಕೆ ಹೆಚ್ಚಿನ ಸಹಾಯ ಧನ ನೀಡುವುದು, iii. ಆಡಳಿತ ರೂಢ ಶಕ್ತಿಗಳು ಕೂಟ ಮಹಾಜಗತ್ತು ಸಂಸ್ಥೆಯನ್ನು ಒಂದು ಶಕ್ತಿಯಾಗಿ ಪರಿಗಣಿಸುವಂತೆ ಮಾಡುವುದು, iv. ಕೂಟ ಸಮಾಜದಿಂದ ರಾಜಕೀಯ ನೇತಾರರು ಹೊರಹೊಮ್ಮಲು ಕ್ರಮಕೈಗೊಳ್ಳುವುದು, v. ಐಎಎಸ್ ಮತ್ತು ಐ ಪಿ ಎಸ್ ಇತ್ಯಾದಿ ನಾಗರಿಕ ಸೇವಾ ಪರೀಕ್ಷೆಗಳಲ್ಲಿ ಕೂಟ ಸಮಾಜದಿಂದ ಹೆಚ್ಚಿನ ಸಂಖ್ಯೆಯಲ್ಲಿ ಅಭ್ಯರ್ಥಿಗಳು ಆಯ್ಕೆಯಾಗಲು ಮಾರ್ಗದರ್ಶನ ಹಾಗೂ ತರಬೇತಿ ಶಿಭಿರಗಳನ್ನು ಏರ್ಪಡಿಸುವುದು, ಇತ್ಯಾದಿ. ಇತರ ಬಲಿಷ್ಠ ಜಾತಿ ಸಮುದಾಯಗಳ ಸಂಸ್ಥೆಗಳಲ್ಲಿ ಕೂಡ ಇಂತಹ ಆಶಯಗಳನ್ನು ಕಾಣಬಹುದು. ಈ ಆಶಯಗಳು ಸೇರಿದಂತೆ ನಮ್ಮ ಎಲ್ಲಾ ಆಶಯಗಳು ಈಡೇರಲು ಮೂಲಭೂತವಾಗಿ ಅಗತ್ಯವಾಗಿರುವುದು ಸಂಸ್ಥೆಯ ಬಲವರ್ಧನೆ. ಕೂಟ ಸಮಾಜ ಹೊರತುಪಡಿಸಿ ಬಹುತೇಕ ಇತರ ಎಲ್ಲಾ ಬ್ರಾಹ್ಮಣ ಪಂಗಡದವರು ಮತ್ತು ಬ್ರಾಹ್ಮಣೇತರ ಹಿಂದೂ ಜಾತಿಯವರು ತಮ್ಮದೇ ಆದ ಮಠಗಳು, ಗುರುಗಳು ಮತ್ತು ಹಿತರಕ್ಷಣಾ ಸಂಘಟನೆಗಳನ್ನು ಕಟ್ಟಿಕೊಂಡಿರುತ್ತಾರೆ. ಇಂತಹ ವ್ಯವಸ್ಥೆಯಿಂದಾಗಿ ಆ ಪಂಗಡಗಳು ತಮ್ಮ ಒಟ್ಟಾರೆ ಅಭಿಪ್ರಾಯ ಹೊರಹಾಕಲು ಸಾಧ್ಯ ಹಾಗೂ ಆ ಪಂಗಡಗಳ ಅಸ್ತಿತ್ವ ಕಾಪಾಡಿಕೊಳ್ಳಲು ಸಹಕಾರಿಯಾಗಿದೆ. ಕೆಲವು ಐತಿಹಾಸಿಕ ಕಾರಣಗಳಿಂದಾಗಿ ಕೂಟ ಸಮಾಜಕ್ಕೆ ಗುರುವೂ ಇಲ್ಲ; ಮಠವೂ ಇಲ್ಲ. ಬದಲಿಗೆ ಕಣ್ಣಿಗೆ ಕಾಣದ ದೇವರನ್ನು ಗುರುವಾಗಿ ನಂಬಿರುವ ಕೂಟ ಸಮಾಜದವರಿಗೆ ಗುರುವಿನೊಡನೆ ಸಂವಾದ ಮಾಡುವ ಅವಕಾಶ ಇಲ್ಲ. ಧಾರ್ಮಿಕ ವಿಚಾರದಲ್ಲಾಗಲಿ, ಸಾಮಾಜಿಕ ವಿಷಯದಲ್ಲಾಗಲಿ, ಕೌಟುಂಬಿಕ ವಿಷಯದಲ್ಲಾಗಲಿ, ಪರಂಪರೆಯ ವಿಚಾರದಲ್ಲಾಗಲಿ, ವೈಚಾರಿಕತೆಯಲ್ಲಾಗಲಿ ಗೊಂದಲ ಉಂಟಾದಾಗ ಮಾರ್ಗದರ್ಶನಕ್ಕಾಗಿ ಸಾಂಸ್ಥಿಕ ವ್ಯವಸ್ಥೆ ಅಗತ್ಯ. ಶ್ರೀ ಗುರುನರಸಿಂಹ ದೇವಸ್ಥಾನದ ಧರ್ಮದರ್ಶಿ ಸ್ಥಾನ ಬಹುಶಃ ಚುನಾಯಿತ ಪ್ರತಿನಿಧಿಯಾಗಿರುವ ಕಾರಣ ಕೂಟ ಸಮಾಜದಿಂದ ಅವರನ್ನು ಗುರುಸ್ಥಾನದಲ್ಲಿ ಕಾಣಲು ಸ್ವೀಕಾರಾರ್ಹತೆ ಆಗಿಲ್ಲ ಮತ್ತು ಧರ್ಮದರ್ಶಿಯ ಸಂದೇಶಗಳನ್ನೂ ಗುರು ಸಂದೇಶ ಎಂಬಂತೆ ಗಂಭೀರವಾಗಿ ಪರಿಗಣಿಸಿ ಪ್ರಾಮಾಣಿಕವಾಗಿ ಅನುಸರಿಸುವ ಮನಃ ಸ್ಥಿತಿ ಕೂಟ ಬಂಧುಗಳಲ್ಲಿ ಕಾಣುತ್ತಿಲ್ಲ. ವಾಸ್ತವ ಹೀಗಿರುವಾಗ ನಮ್ಮತನ ಕಾಪಾಡಿಕೊಳ್ಳಲು ಇರುವ ಏಕೈಕ ಮಾರ್ಗ ಪ್ರಾಯಕ್ಕೆ ಬಂದಂತಹ ಎಲ್ಲಾ ಕೂಟಬಂಧುಗಳು ಕೂಟ ಮಹಾಜಗತ್ತಿನ ಸದಸ್ಯತ್ವವನ್ನು ಪಡೆದು ಸಂಸ್ಥೆಯನ್ನು ಬಲವರ್ಧನೆಗೊಳಿಸುವುದು ಹಾಗೂ ಆ ಮೂಲಕ ತನ್ನ ಅಸ್ತಿತ್ವ ಕಾಪಾಡಿಕೊಳ್ಳುವುದು. ಇಲ್ಲವಾದಲ್ಲಿ ಮುಂದೊಂದು ದಿನ ಕೂಟ ಸಮಾಜ ಛಿದ್ರ ಛಿದ್ರವಾಗಿ ಅನೇಕ ಕೂಟಸ್ಥರಲ್ಲಿ ಅನಾಥ ಪ್ರಜ್ಞೆ ಕಾಡುವುದು ಖಚಿತ. ಅಂದು ಮಿಂಚಿ ಹೋದ ಕಾಲಕ್ಕೆ ಚಿಂತಿಸಿ ಫಲವಿಲ್ಲ. ಇಂದಿನ ವಿದ್ಯಮಾನಗಳನ್ನು ಗಮನಿಸಿದರೆ ಮುಂದಿನ ದಿನಗಳಲ್ಲಿ ಬ್ರಾಹ್ಮಣ ಜಾತಿ ಮತ್ತು ಬ್ರಾಹ್ಮಣತ್ವ ಉಳಿಸಿಕೊಳ್ಳುವುದೇ ಒಂದು ಸವಾಲಾಗಿದೆ. ಬ್ರಾಹ್ಮಣತ್ವ ಉಳಿದರೆ ಹಿಂದುತ್ವ ಉಳಿಯುತ್ತದೆ. ಚದುರಿ ಹೋಗುತ್ತಿರುವ ಯುವ ಕೂಟ ಬಂಧುಗಳನ್ನು ಒಗ್ಗೂಡಿಸಬೇಕಾದರೆ, ಕೂಟ ಸಮಾಜ ತನ್ನ ಅಸ್ತಿತ್ವ ಕಾಪಾಡಿಕೊಳ್ಳಬೇಕಾದರೆ, ಕೂಟ ಸಮಾಜ ತನ್ನ ಸಂಸ್ಕೃತಿ, ಪದ್ಧತಿ, ಆಚಾರ, ವಿಚಾರ, ಪರಂಪರೆ ಉಳಿಸಿ ಬೆಳೆಸಬೇಕಾದರೆ ಕೂಟ ಮಹಾಜಗತ್ತು ಸಂಸ್ಥೆಯನ್ನು ಕೂಟಸ್ಥರೆಲ್ಲರೂ ಒಪ್ಪಿ ಅಭಿಮಾನದಿಂದ ಬೆಳೆಸಿ ಶಕ್ತಿಯುತವಾಗಿ ಮಾಡಬೇಕು. 1921 ಜನವರಿ 13 ರಂದು ದಿ. ವಡೇರಹೋಬಳಿ ನರಸಿಂಹ ಕಾರಂತರ (ಕೋಣಿ ಕಾರಂತ) ಅಧ್ಯಕ್ಷತೆಯಲ್ಲಿ ಸಾಲಿಗ್ರಾಮ ಶ್ರೀ ಗುರುನರಸಿಂಹ ದೇವಸ್ಥಾನದಲ್ಲಿ ಕೂಟ ಮತಸ್ಥರ ಪ್ರಥಮ ಮಹಾಸಭೆ ನಡೆದು ಕೂಟ ಸಮಾಜ ಸಂಘಟನೆಗಾಗಿ ಮತ್ತು ದೇವಸ್ಥಾನದ ಆಡಳಿತ ವ್ಯವಸ್ಥೆಗಾಗಿ ಒಂದು ಸಂಸ್ಥೆ ಕಟ್ಟುವ ನಿರ್ಣಯ ಆಗಿದ್ದರೂ ಅದು ಅನುಷ್ಠಾನವಾಗಿ ಕೂಟ ಮಹಾಜಗತ್ತು ಸಂಸ್ಥೆ ಜನ್ಮ ತಳೆಯಲು 32 ವರ್ಷಗಳೇ ಕಾಯಬೇಕಾಯಿತು. ಕೂಟ ಮಹಾಜಗತ್ತು ಅಸ್ತಿತ್ವಕ್ಕೆ ಬಂದನಂತರವೇ ಶ್ರೀ ಗುರು ನರಸಿಂಹ ದೇವಸ್ಥಾನದ ಆಡಳಿತದ ಹಕ್ಕನ್ನು ಕೂಟ ಸಮಾಜಕ್ಕೆ ದಕ್ಕಿಸಿಕೊಳ್ಳಲು ಕಾನೂನಾತ್ಮಕವಾಗಿ ಸತತ ಹೋರಾಟ ನಡೆಸಿ ಜಯಶಾಲಿಯಾಗಲು ಸಾಧ್ಯವಾಯಿತು. ಇದು ಸಾಂಘಿಕ ಬಲ.

ಕೂಟ ಮಹಾಜಗತ್ತಿನ 37 ಅಂಗಸಂಸ್ಥೆಗಳಲ್ಲಿ ಬೆಂಗಳೂರು ಅಂಗಸಂಸ್ಥೆಯು ಬೃಹತ್ ಅಂಗಸಂಸ್ಥೆಯಾಗಿರುವುದು ಇಂದಿಗೆ ಹೆಗ್ಗಳಿಕೆ ಮಾತಾಗಿಲ್ಲ. ಬೆಂಗಳೂರು ಅಂಗಸಂಸ್ಥೆಗೆ 68 ವರ್ಷಗಳು ಸಂದಿದ್ದು ಈ ಅವಧಿಯಲ್ಲಿ ಬೆಂಗಳೂರಿನಲ್ಲಿ ನೆಲೆಸಿರುವ ಕೂಟ ಬಂಧುಗಳ ಸಂಖ್ಯೆ ಗಣನೀಯವಾಗಿ ಏರಿದ್ದರೂ ಸದಸ್ಯತ್ವ ಪಡೆದವರ ಸಂಖ್ಯೆ ಮಾತ್ರ ಶೇ5 ರಷ್ಟೂ ಇಲ್ಲದಿರುವುದು ನಮ್ಮ ಸಮಾಜದ ದೌರ್ಬಲ್ಯವಾಗಿದೆ. ನಮ್ಮ ಈ ಮಂದಗತಿಯ ಬೆಳವಣಿಗೆಗೆ ನಾವೇ ಕಾರಣರಾಗಿರುವುದು ಶೋಚನೀಯ. ನಾವು ಸಾಂಘಿಕವಾಗಿ ಸದೃಢವಾಗದ ಹೊರತು ನಮ್ಮ ಸಮಾಜದಲ್ಲಿನ ಮಹತ್ತರ ಆಶಯಗಳು ಈಡೇರದೆ ಹಗಲು ಕನಸಾಗಿಯೇ ಉಳಿಯುತ್ತದೆ. ಹಾಗಾಗಿ ಮುಂದಿನ ದಿನಗಳಲ್ಲಿ ಸಮರೋಪಾದಿಯಲ್ಲಿ ಮನೆ ಮಂದಿಯೆಲ್ಲ (ವಯಸ್ಕರು) ಕೂಟ ಮಹಾಜಗತ್ತಿನ ಸದಸ್ಯರಾಗುವ ಮೂಲಕ ಕೂಟ ಸಮಾಜದ ಸಂಘಟನೆ ಬಲಗೊಂಡು ವಿಶಾಲ ಸಮಾಜದಲ್ಲಿ ನಮ್ಮ ಸಂಸ್ಥೆಯ ಪ್ರಗತಿಪರ ಹಾಗೂ ಮುಂದಾಲೋಚನೆಯುಳ್ಳ ಪ್ರತಿ ಹೆಜ್ಜೆಗಾಗಿ ಇತರರು ಎದುರು ನೊಡುವಂತೆ ಒಂದು ಶಕ್ತಿಯಾಗಿ ಗುರುತಿಸಿಕೊಳ್ಳೊಣ. ವೈಯಕ್ತಿಕವಾಗಿ ಸಾಧಿಸಲಾಗದ್ದು ಸಾಂಘಿಕವಾಗಿ ಸಾಧ್ಯ. ಸಾಂಘಿಕವಾಗಿ ಸಾಧಿಸಲು ಸಂಸ್ಥೆಯು ಎಲ್ಲ ಕೂಟಸ್ಥರು ಪ್ರಮುಖವಾಗಿ ಯುವಕರ ಸೇರ್ಪಡೆಯಿಂದ ಬಲವರ್ಧನೆಯಾಗಬೇಕು. ನಿಯಮಾವಳಿಯಂತೆ ಒಂದು ಕುಟುಂಬದಿಂದ ಒಬ್ಬರು ಮಾತ್ರ ಕೂಟ ಜಮಹಾಜಗತ್ತಿನ ಸದಸ್ಯತ್ವ ಪಡೆದರೆ ಸಾಕು ಎಂಬ ಅಭಿಪ್ರಾಯ ಅನೇಕರಲ್ಲಿದೆ. ಇದು ತಪ್ಪು ಕಲ್ಪನೆ. ನಿಯಮಾವಳಿಯಲ್ಲಿ ಅಂತಹ ಯಾವ ನಿರ್ಬಂಧ ಅಥವಾ ತೊಡಕು ಇಲ್ಲ. ಅವಿಭಾಜ್ಯ ದಕ್ಷಿಣಕನ್ನಡ ಜಿಲ್ಲೆಯಲ್ಲಿ ಕೂಡ ಕೂಟೇತರ ಬ್ರಾಹ್ಮಣ ಪಂಗಡಗಳು ತಮ್ಮದೇ ಆದ ಮಠ, ಗುರು ಹಾಗೂ ಹಿತರಕ್ಷಣಾ ಸಂಸ್ಥೆಗಳನ್ನು ಹುಟ್ಟುಹಾಕಿಕೊಂಡು ತಮ್ಮತನವನ್ನು ಉಳಿಸಿಕೊಳ್ಳಲು ಶ್ರಮಿಸುತ್ತಿದ್ದಾರೆ ಮತ್ತು ಬ್ರಾಹ್ಮಣತ್ವಕ್ಕೆ ಒದಗಿಬಂದ ಸವಾಲನ್ನು ಎದುರಿಸಲು ಹೋರಾಡುತ್ತಿದ್ದಾರೆ. ಕೂಟಸ್ಥರೇ! ಏಳಿ, ಎದ್ದೇಳಿ, ಇನ್ನು ತಡಮಾಡದೆ ಸಕಲ ಕೂಟಸ್ಥರು ಕೂಟ ಮಹಾ ಜಗತ್ತಿಗೆ ಸದಸ್ಯರಾಗುವಂತೆ ಪ್ರೇರೇಪಿಸಿರಿ. ಮೊದಲು ಸಂಘಟಿತರಾಗೋಣ ಆ ಮೂಲಕ ನಮ್ಮ ಸಮಾಜದ ಉನ್ನತಿಗಾಗಿ ಹೋರಾಡೋಣ.

ಇನ್ನೊಂದು ವಿಷಯ ತಮ್ಮೊಡನೆ ಹಂಚಿಕೊಳ್ಳುವುದೆಂದರೆ ಬೆಂಗಳೂರು ವಸಂತಪುರದಲ್ಲಿ ನಮ್ಮ ಅಂಗಸಂಸ್ಥೆಯ ಶ್ರೀ ಗುರುನರಸಿಂಹ ಧಾರ್ಮಿಕ ಸಭಾಂಗಣ ಕೂಟಸ್ಥರಿಗೆ ಶುಭ ಕಾರ್ಯಗಳನ್ನು ನಡೆಸಲು ಅತ್ಯಂತ ಸ್ಪರ್ಧಾತ್ಮಕ ದರದಲ್ಲಿ ಲಭ್ಯವಿದೆ. ಹೆಚ್ಚಿನ ಸಂಖ್ಯೆಯಲ್ಲಿ ಈ ಸೌಲಭ್ಯವನ್ನು ಬಳಸಿಕೊಳ್ಳಬೇಕೆಂಬುದು ನಮ್ಮ‌ಮನವಿ. ಕಡೆಯದಾಗಿ, ಎಲ್ಲ ಕೂಟಸ್ಥರು ತಮ್ಮ ಶ್ರೇಯಸ್ಸಿಗಾಗಿ ಮನೆಗಳಲ್ಲಿ ಶ್ರೀ ಗುರುನರಸಿಂಹನಿಗೆ ಪ್ರತಿನಿತ್ಯ ಪೂಜೆ ಸಲ್ಲಿಸ ಬೇಕೆಂದು ಕೂಟ ಮಹಾಜಗತ್ತಿನ ಸರ್ವ ಶ್ರೇಷ್ಟ ಅಧ್ಯಕ್ಷರಾಗಿದ್ದ (1958-71) ದಿ.ಕೋಟ ವಾಸುದೇವ ಕಾರಂತರು ತಮ್ಮ ಪುಸ್ತಕಗಳಲ್ಲಿ ಕಾರಣ ಸಮೇತ ತಿಳಿಸಿರುತ್ತಾರೆ. ಪೂಜೆಗಾಗಿ ಶ್ರೀಗುರುನರಸಿಂಹ ಬೆಳ್ಳಿ ಫೋಟೊ ನಮ್ಮ ಕಚೇರಿಯಲ್ಲಿ ಲಭ್ಯವಿದೆ. ಬಂಧುಗಳೇ, ಕೊವಿಡ್ ಮಹಾಮಾರಿಯಿಂದಾಗಿ 2020-2021 ಎರಡು ವರ್ಷಗಳು ಸಂಸ್ಥೆಯ ಯೋಜಿತ ಚಟುವಟಿಕೆಗಳಿಗೆ ಧಕ್ಕೆಯಾಗಿರುವುದನ್ನು ಹಿಂದಕ್ಕೆ ತಳ್ಳಿ ಮುಂಬರುವ ದಿನಗಳಲ್ಲಿ ತಮ್ಮೆಲ್ಲರ ಸಹಕಾರದಿಂದ ಹೆಚ್ಚಿನ ಹುರುಪಿನಿಂದ ಕೂಟ ಮಹಾಜಗತ್ತು ಸಂಸ್ಥೆಯನ್ನು ಬೆಳೆಸೋಣ, ಇಂತಿ ನಿಮ್ಮ ವಿಶ್ವಾಸಿ

– ಡಾI ಪಿ.ಎಂ.ಗಿರಿಧರ ಉಪಾಧ್ಯಾಯ – ಅಧ್ಯಕ್ಷ, ಕೂಮಜ, ಬೆಂಗಳೂರು ಅಂಗಸಂಸ್ಥೆ.